Please enable javascript.ಹಸ್ತಪಾಳಯದಲ್ಲಿ ಯುದ್ಧಕಾಲೇ ಶಸ್ತ್ರತ್ಯಾಗ... - ಹಸ್ತಪಾಳಯದಲ್ಲಿ ಯುದ್ಧಕಾಲೇ ಶಸ್ತ್ರತ್ಯಾಗ... - Vijay Karnataka

ಹಸ್ತಪಾಳಯದಲ್ಲಿ ಯುದ್ಧಕಾಲೇ ಶಸ್ತ್ರತ್ಯಾಗ...

Vijaya Karnataka Web | 13 Mar 2014, 4:40 am
Subscribe

ಯುದ್ಧಕ್ಕೆ ಮೊದಲೇ ಶಿರಬಾಗಿ ಶಸ್ತ್ರತ್ಯಾಗ ಮಾಡುವ ಸ್ಥಿತಿಗೆ ಹಸ್ತ ಪಾಳಯ ತಲುಪಿದೆಯೇ? ಅಂತಹದ್ದೊಂದು ಅನುಮಾನ ಇದೀಗ ರಾಜಕೀಯ ವಲಯದಲ್ಲಿ ತೇಲಾಡುತ್ತಿದೆ.

ಹಸ್ತಪಾಳಯದಲ್ಲಿ ಯುದ್ಧಕಾಲೇ ಶಸ್ತ್ರತ್ಯಾಗ...
-ರಾಹುಲ್ ಅಪೇಕ್ಷೆಗೆ ಅಸಹಾಕಾರ, ಕಣಕ್ಕಿಳಿಯಲು ಹಿರಿಯರ ಹಿಂಜರಿಕೆ-

ಹೊಸದಿಲ್ಲಿ: ಯುದ್ಧಕ್ಕೆ ಮೊದಲೇ ಶಿರಬಾಗಿ ಶಸ್ತ್ರತ್ಯಾಗ ಮಾಡುವ ಸ್ಥಿತಿಗೆ ಹಸ್ತ ಪಾಳಯ ತಲುಪಿದೆಯೇ? ಅಂತಹದ್ದೊಂದು ಅನುಮಾನ ಇದೀಗ ರಾಜಕೀಯ ವಲಯದಲ್ಲಿ ತೇಲಾಡುತ್ತಿದೆ. ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರ ಅಪೇಕ್ಷೆಯನ್ನು ಧಿಕ್ಕರಿಸಿ ಹಿರಿಯ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದೇ ಈ ಅನುಮಾನದ ಮೋಡ ದಟ್ಟೈಸಲು ಕಾರಣ ಎನ್ನಲಾಗಿದೆ.

ಈಗಾಗಲೇ 194 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇನೋ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆದರೆ ಹಿರಿಯ ನಾಯಕರು ಚುನಾವಣೆಗೆ ಸ್ಪರ್ಧಿಸಬೇಕೆಂಬ ರಾಹುಲ್ ಬಯಕೆಯನ್ನೂ ಧಿಕ್ಕರಿಸಿ ಪಿ.ಚಿದಂಬರಂ, ಜಯಂತಿ ನಟರಾಜನ್ ಅವರಂತಹ ಮುಖಂಡರು ಹಿಂದೇಟು ಹಾಕುತ್ತಿದ್ದಾರೆಂದು ಪಕ್ಷದ ಮೂಲಗಳು ಹೇಳಿವೆ. ಹೀಗೆ ಹಿಂದೆ ಸರಿಯುತ್ತಿರುವ ನಾಯಕರ ಪಟ್ಟಿಯಲ್ಲಿ ಯುವ ನಾಯಕ ಹಾಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ, ಬಂದರು ಖಾತೆ ಸಚಿವ ಜಿ.ಕೆ.ವಾಸನ್ ಅವರೂ ಸೇರಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಎರಡನೇ ಪಟ್ಟಿ ಬಿಡುಗಡೆ ಮಾಡಲು ತಡವರಿಸುತ್ತಿದೆ ಎನ್ನಲಾಗಿದೆ.

ದಕ್ಷಿಣಲ್ಲಿ ವಿತ್ತ ಸಚಿವ ಚಿದಂಬರಂ ಅವರು ತಮ್ಮ ಬದಲಿಗೆ ಪುತ್ರ ಕಾರ್ತಿ ಚಿದಂಬರಂಗೆ ತಮ್ಮ ಸ್ವಕ್ಷೇತ್ರ ತಮಿಳುನಾಡಿನ ಶಿವಗಂಗಾವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಆದಾಗ್ಯೂ ಅವರು ರಾಜ್ಯಸಭೆಯ ಮೂಲಕ ಮತ್ತೊಮ್ಮೆ ಸಂಸತ್ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಮಂಗಳವಾರ ನಡೆದ ತಮಿಳುನಾಡು ಕಾಂಗ್ರೆಸ್ ಪರಿಶೀಲನಾ ಸಮಿತಿ ಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿಕೊಳ್ಳಲಾಗಿದ್ದ ಮನವಿಗೆ ಜಯಂತಿ ನಟರಾಜನ್ ಸ್ಪಂದಿಸಿಲ್ಲ. ಅವರೂ ಕೂಡ ಕಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇದರ ಜತೆಗೆ ತಮಿಳುನಾಡಿನ ಮತ್ತೊಬ್ಬ ಕಾಂಗ್ರೆಸ್ ಮುಖಂಡ ವಾಸನ್ ಅವರೂ ಚುನಾವಣೆಗೆ ಸ್ಪರ್ಧಿಸದೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ನಡೆಸುವುದಾಗಿ ಘೋಷಿಸಿದ್ದಾರೆ. ಈ ಬಾರಿ ಡಿಎಂಕೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಮನಸ್ಸು ತೋರದಿರುವುದೇ ಅವರ ಹಿಂಜರಿಕೆ ಕಾರಣ ಎಂದು ಹೇಳಲಾಗಿದೆ.

ಇನ್ನು ಉತ್ತರ ಭಾರತದಲ್ಲಿ ವೈಯಕ್ತಿಕ ಕಾರಣಗಳಿಂದ ಲೂಧಿಯಾನದಿಂದ ಸ್ಪರ್ಧಿಸಲು ಮನೀಶ್ ತಿವಾರಿ ಮನಸ್ಸು ತೋರುತ್ತಿಲ್ಲ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲೂ ಅವರ ಹೆಸರಿರಲಿಲ್ಲ. ಅವರು ಚಂಡೀಗಢಕ್ಕೆ ವಲಸೆ ಹೋಗುವ ಇರಾದೆ ಹೊಂದಿದ್ದಾರೆ. ಆದರೆ ತಿವಾರಿ ಅವರ ಈ ಆಸೆಗೆ ಮಾಜಿ ರೈಲ್ವೆ ಸಚಿವ ಪಿ.ಕೆ.ಬನ್ಸಲ್ ತಣ್ಣೀರೆರಚುವ ಲಕ್ಷಣಗಳಿವೆ. ಇನ್ನೊಂದೆಡೆ ಆಮ್ ಆದ್ಮಿ ಪಕ್ಷದಿಂದ ಸಾಮಾಜಿಕ ಕಾರ‌್ಯಕರ್ತ ಎಚ್.ಎಸ್. ಫೂಲ್ಕಾ ಕೂಡ ಲೂಧಿಯಾನದಿಂದ ಸ್ಪರ್ಧಿಸಲಿರುವುದರಿಂದ ಲೂಧಿಯಾನದ ಚಿತ್ರಣ ಸಂಕೀರ್ಣಗೊಂಡಿದೆ.

ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರು ಅಜ್ಮೇರ್‌ನಿಂದ ಕಣಕ್ಕಿಳಿಯುವ ಉತ್ಸಾಹ ತೋರುತ್ತಿಲ್ಲ ಎನ್ನಲಾಗಿತ್ತು. ಆದರೆ ಅವರು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಇತ್ತೀಚಿನ ವರದಿಗಳು ಖಚಿತಪಡಿಸಿವೆ. ಇನ್ನೂ ಕೆಲ ಮೂಲಗಳ ಪ್ರಕಾರ ಆ ಕ್ಷೇತ್ರದಿಂದ ಮಾಜಿ ಕ್ರಿಕೆಟ್‌ಪಟು ಮೊಹಮ್ಮದ್ ಅಜರುದ್ದೀನ್ ಸ್ಪರ್ಧಿಸುವ ಸಾಧ್ಯತೆ ಇದೆ.

ಕಳಂಕಿತರೇ ಮುಂಚೂಣಿ
ಈ ಮಧ್ಯೆ ವಿವಿಧ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಕಳಂಕಿತ ಹಣೆಪಟ್ಟಿಯ ನಾಯಕರು ಚುನಾವಣೆಗೆ ಸ್ಪರ್ಧಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ರೈಲ್ವೆ ನೇಮಕಾತಿ ಲಂಚ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್, ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸಿಲುಕಿರುವ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಮತ್ತು ಕಾಮನ್‌ವೆಲ್ತ್ ಹಗರಣದಲ್ಲಿ ಜೈಲು ಸೇರಿ ಹೊರಬಂದ ಸುರೇಶ್ ಕಲ್ಮಾಡಿ ಅವರು ಸ್ಪರ್ಧಿಸಲು ಉತ್ಸುಕತೆ ತೋರುತ್ತಿದ್ದಾರೆ. ಆದರೆ ಇವರಲ್ಲಿ ಚವಾಣ್ ಮತ್ತು ಕಲ್ಮಾಡಿ ಅವರಿಗೆ ಟಿಕೆಟ್ ದಕ್ಕುವ ಸಾಧ್ಯತೆ ಕ್ಷೀಣಿಸಿವೆ. ಆದರೆ ಬನ್ಸಲ್ ವಿರುದ್ಧ ಇದುವರೆಗೂ ಯಾವುದೇ ದೋಷಾರೋಪಪಟ್ಟಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವರಿಗೆ ಚಂಡೀಗಢದಿಂದ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆಯೂ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ